ದೇವನೂರು ಮಹಾದೇವ :-
1948 ಕನ್ನಡದ ದಲಿತ ಬಂಡಾಯ ಸಾಹಿತ್ಯ ಸಂದರ್ಭದಲ್ಲಿ ದಲಿತ ಸಂವೇದನೆಗಳನ್ನು ಅತ್ಯಂತ ಸೃಜನಶೀಲವಾಗಿ ಪ್ರಕಟಿಸಿದ ಪ್ರಸಿದ್ಧ ಕಥೆಗಾರ, ಕಾದಂಬರಿಕಾರ ಹಾಗೂ ಸಾಮಾಜಿಕ ಹೋರಾಟಗಾರ. ಇವರ ನಿಜವಾದ ಹೆಸರು ಎನ್. ಮಹಾದೇವಯ್ಯ. ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ದೇವನೂರಲ್ಲಿ 10 ಜೂನ್ 1948ರಂದು ಜನಿಸಿದರು. ತಂದೆ ನಂಜಯ್ಯ ಪೊಲೀಸ್ ಕಾನ್ಸ್‍ಟೇಬಲ್ ಆಗಿದ್ದರು. ತಾಯಿ ನಂಜಮ್ಮ. ದೇವನೂರು, ನಂಜನಗೂಡು, ಮೈಸೂರುಗಳಲ್ಲಿ ಮಹಾದೇವ ಅವರ ವಿದ್ಯಾಭ್ಯಾಸ ಜರುಗಿತು. ಮೈಸೂರು ವಿಶ್ವವಿದ್ಯಾನಿಲಯದಿಂದ ಕನ್ನಡ ಎಂ.ಎ. ಪದವಿ ಪಡೆದರು. ಅನಂತರ ಕೆಲಕಾಲ ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದಲ್ಲಿ ಅಧ್ಯಾಪಕ ಸಂಶೋಧಕರಾಗಿ ಕಾರ್ಯನಿರ್ವಹಿಸಿದರು (1989). ಅನಂತರದ ವರ್ಷದಲ್ಲಿ ಪೂರ್ಣಾವಧಿ ವ್ಯವಸಾಯಗಾರರಾದರು.

	ವಿದ್ಯಾಭ್ಯಾಸ ಮಾಡುತ್ತಿದ್ದ ದಿನಗಳಲ್ಲಿಯೇ ಮಹಾದೇವ ಸಾಹಿತ್ಯ ರಚನೆಯಲ್ಲಿ ತೊಡಗಿದ್ದರು. ಆರಂಭದಲ್ಲಿ ಇವರು ಬರೆದದ್ದು ಕವನಗಳನ್ನು ನವ್ಯಸಾಹಿತ್ಯ ಉತ್ತುಂಗ ಸ್ಥಿತಿಯಲ್ಲಿದ್ದ ಕಾಲದಲ್ಲಿ ಇವರು ಕಥಾ ರಚನೆಯಲ್ಲಿ ತೊಡಗಿದ್ದರು. ಅಮಾಸ, ಡಾಂಬರು ಬಂದುದು, ಮಾರಿಕೊಂಡವರು ಮೊದಲಾದ ದಲಿತ ಸಂವೇಧನೆಯನ್ನೊಳಗೊಂಡ ಮೌಲಿಕ ಕಥೆಗಳನ್ನು ಪ್ರಕಟಿಸಿದರು. ಕನ್ನಡ ಸಾಹಿತ್ಯ ವಲಯದಲ್ಲಿ ಈ ಕಥೆಗಳು ಬಹುಬೇಗ ಚರ್ಚೆಯ ವಸ್ತುಗಳಾದುವು. ಜೊತೆಗೆ ನವ್ಯೋತ್ತರದ ಅಗ್ರಗಣ್ಯ ಲೇಖಕನೆನಿಸುವ ಸೂಚನೆಗಳನ್ನು ನೀಡಿದವು. ಕಾಲಕ್ರಮದಲ್ಲಿ ಇವರು ದ್ಯಾವನೂರು (ಕಥಾಸಂಕಲನ), ಒಡಲಾಳ, ಕುಸುಮಬಾಲೆ (ಕಾದಂಬರಿ) ಈ ಕೃತಿಗಳನ್ನು ಹೊರತಂದರು. ಸಂಖ್ಯಾದೃಷ್ಟಿಯಿಂದ ಕೃತಿಗಳು ಕಡಿಮೆ ಎನಿಸಿದರೂ ಸತ್ತ್ವದ ದೃಷ್ಟಿಯಿಂದ, ಹಿರಿಮೆಯ ದೃಷ್ಟಿಯಿಂದ ಮಹತ್ತ್ವದ ಕೃತಿಗಳು.

	ಸ್ವಾತಂತ್ರ್ಯಾನಂತರದ ದಿನಗಳಲ್ಲಿ ರೂಢಿಗೆ ಬಂದ ಶಿಕ್ಷಣ ಕ್ರಮ ಅಂಬೇಡ್ಕರ್ ಚಳವಳಿಯ ಪ್ರಭಾವ ಮತ್ತು ಆಧುನಿಕ ವಿದ್ಯಮಾನಗಳಿಂದಾದ ದೃಷ್ಟಿಕೋನಗಳಿಂದ ದಲಿತರಲ್ಲಿ ಜಾಗೃತಿ ಮೂಡಿ ದಲಿತ ಲೇಖಕರು, ದಲಿತ ಪ್ರಪಂಚದ ಒಳ ಹೊರಗನ್ನು ಅದುವರೆಗೆ ಕಂಡರಿಯದ ರೀತಿಯಲ್ಲಿ ಅನಾವರಣ ಮಾಡತೊಡಗಿದರು. ಶತಶತಮಾನಗಳಿಂದ ದಲಿತರನ್ನು ಕಾಡುತ್ತ ಬಂದಿರುವ  ಅಸ್ಪ್ನೃಶ್ಯತೆ, ಧಾರ್ಮಿಕ, ಸಾಮಾಜಿಕ ಅಮಾನುಷ ಪದ್ಧತಿಗಳು, ಅಪಮಾನದ ಸಂಗತಿಗಳು ಸಾಹಿತ್ಯದಲ್ಲಿ ಅನಾವರಣಗೊಳ್ಳತೊಡಗಿದವು. ದಲಿತನೊಬಪಿನ ಸಂಕಷ್ಟಗಳು ಸಾಮಾಜಿಕ ಸಂಘರ್ಷವೊಂದಕ್ಕೆ ಪ್ರೇರಣೆಯಾಗಬೇಕು ಎಂಬುದು ದಲಿತ ಸಾಹಿತ್ಯದ ಮುಖ್ಯ ಲಕ್ಷಣವೆನಿಸಿತು. ಪೂರ್ಣವಾಗಿ ದಲಿತ ಲೋಕವನ್ನು, ದಲಿತ ಸಂಸ್ಕøತಿಯ ಸೂಕ್ಷ್ಮಗಳನ್ನು ತೆರೆದಿಡುವುದೇ ಇಲ್ಲಿ ಪ್ರಮುಖ ವಿಷಯವಾಯಿತು. ಮಹಾದೇವ ಅವರ ಕಥಾ ಸಾಹಿತ್ಯ ಈ ಮಾತಿಗೆ ಉದಾಹರಣೆಯಾಗಿದೆ. ಸಾಮಾನ್ಯವಾಗಿ ಇವರ ಕಥೆಗಳಲ್ಲಿ ಬರುವ ದಲಿತರ ವಾಸಸ್ಥಾನ, ಹಟ್ಟಿ, ಹರಿದಿರುವ ಬಟ್ಟೆ, ಊರಿನ ದಾರಿಯ ವಿವರಗಳು ಕುವೆಂಪು ಅವರ ಕಾದಂಬರಿಗಳಲ್ಲಿನ ಕಾಡಿನ ವಿವರಗಳಂತೆ ದಟ್ಟವಾಗಿರುವುದನ್ನು ಕಾಣಬಹುದು. ಒಂದು ದಹನದ ಕತೆಯಲ್ಲಿ ನಾಯಕ ಕಾಣುವ ತನ್ನ ಹಟ್ಟಿಯ ವರ್ಣನೆ ಈ ಮೇಲಿನ ಮಾತಿಗೆ ಉದಾಹರಣೆ ಎಂಬಂತಿದೆ. ಇಂಥ ಬರೆವಣಿಗೆಯ ಮೂಲಕ ಪ್ರಪ್ರಥಮಬಾರಿಗೆ ದಲಿತರ ಊರು ಕೇರಿಗಳ ವಿಷಯ ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಯಿತು.

	ದ್ಯಾವನೂರು ಕಥಾಸಂಕಲನದ ಅನಂತರ ಬಂದ ಒಡಲಾಳ ಕಾದಂಬರಿ ದಲಿತ ಕುಟುಂಬಗಳ ಬದುಕನ್ನು ಸಮರ್ಥವಾಗಿ ಅಭಿವ್ಯಕ್ತಿಸಿದ ಕೃತಿ. ದಲಿತ ಬದುಕಿನ ವಿವಿಧ ಮುಖಗಳನ್ನು ಚಿತ್ರಿಸುವಲ್ಲಿ ಮಹಾದೇವ ಯಶಸ್ವಿ ಬರೆಹಗಾರರಾಗಿದ್ದಾರೆ. ಸಾಕವ್ವ ಈ ಕಾದಂಬರಿಯ ಕೇಂದ್ರ ಪಾತ್ರ. ಇವಳ ಸುತ್ತ ಹಬ್ಬಿರುವ ವರ್ತಮಾನದ ಶೋಷಣೆಮೂಲ ಬದುಕಿನ ನಿರೂಪಣೆಯ ಈ ಬರೆವಣಿಗೆಗೆ ಲಾಲಿತ್ಯವಿದೆ. ಹಾಸ್ಯವಿದೆ, ಮೇಲುದನಿ ಇದೆ, ಅಭಿವ್ಯಕ್ತಿ ಕ್ರಮದಲ್ಲಿ ಕುವೆಂಪು ಮತ್ತು ಮಾಸ್ತಿಯವರನ್ನು ನೆನಪಿಸುವಂತಿದೆ. ಅಷ್ಟರಮಟ್ಟಿಗೆ ದಲಿತ ಸಂವೇದನೆ ಪ್ರಕಟವಾಗಿದೆ.

	ಕುಸುಮಬಾಲೆ ಮಹಾದೇವ ಅವರ ಮೂರನೆಯ ಕೃತಿ. ಈ ಕಾದಂಬರಿಯ ರಚನಾಸ್ವರೂಪ ವಿಶಿಷ್ಟವಾದದ್ದು. ನಿರ್ದಿಷ್ಟ ಕಾಲದಲ್ಲಿ ಕತೆಯನ್ನು ಹೇಳದೆ ಭೂತ, ವರ್ತಮಾನ ಮತ್ತು ಭವಿಷ್ಯತ್ಕಾಲಗಳಲ್ಲಿ ಹೇಳತೊಡಗಿರುವುದು ಕಂಡುಬರುತ್ತದೆ. ಹೊಲೆಯರ ಕೇರಿಯಲ್ಲಿ ಜರುಗುವ ಕಾರ್ಯಾಚರಣೆಗಳೆಲ್ಲ ವರ್ತಮಾನಕ್ಕೂ ಅಕ್ಕಮಹಾದೇವಮ್ಮ ಮತ್ತು ಯಾಡರ ವಿವರಗಳು ಭೂತಕಾಲಕ್ಕೂ ಪರ್ಯಾದ (ಕುಸುಮಳ ತಮ್ಮ), ಈರಿಯ ಮಗು ಕೆಂಪಿಯ ಗರ್ಭದಲ್ಲಿರುವ ಶಿಶು ಇವು ಭವಿಷ್ಯತ್ಕಾಲಕ್ಕೂ ಸಂಬಂಧಿಸಿದವಾಗಿವೆ. ಜೀವಾತ್ಮಕ್ಕೂ ಮಂಚಕ್ಕೂ ನಡೆಯುತ್ತಿದ್ದ ಸಂಭಾಷಣೆ, ಜೋತಮ್ಮಗಳ ನಡುವೆ ನಡೆಯುತ್ತಿದ್ದ ಚರ್ಚೆ, ಜನನ ಮರಣಗಳಿಗೆ ಸಂಬಂಧಿಸಿದ ಜಾನಪದಗಳು ಇತ್ಯಾದಿಗಳಲ್ಲೆ ಮತ್ತೊಂದು ಹಂತವನ್ನು ತಲುಪುವಂಥವು. ಅಲ್ಲಲ್ಲಿ ಕಲಸು ಮೇಲೋಗರವಾಗಿರುವ, ಎಲ್ಲೆಲ್ಲೋ ಹರಡಿಕೊಂಡಿರುವ ವಿವರಗಳನ್ನು ತುಂಬ ಎಚ್ಚರಿಕೆಯಿಂದ ಗಂಭೀರವಾಗಿ ಗಮನಿಸುತ್ತ ಕ್ರೋಡೀಕರಿಸುತ್ತ ಹೋದರೆ ಕಾದಂಬರಿಯ ಆರಂಭದಲ್ಲಿ ಲೇಖಕರು ಸಂಗ್ರಹಿಸಿಕೊಂಡಿರುವ ಕತೆಯನ್ನು ಅದರ ವಸ್ತುವನ್ನು ಅರ್ಥಮಾಡಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ಮಹಾದೇವ ಅವರ ಉಳಿದೆರಡು ಕೃತಿಗಳಿಗಿಂತ ಇದು ಭಿನ್ನ ಸ್ವರೂಪದ್ದಾಗಿದೆ. ಇಲ್ಲಿಯ ಭಾಷೆ ಅದುವರೆಗೆ ಕನ್ನಡ ಸಾಹಿತ್ಯದಲ್ಲಿ ದಾಖಲಾಗಿರದ ಗ್ರಾಮ್ಯ ಸೊಗಡಿನಿಂದ ಕೂಡಿದ್ದು ವಿಶಿಷ್ಟವಾಗಿದೆ. ಏನೂ ಅರಿಯದ ಪರ್ಸಾದನಂಥವರು ಪಡುವ ಸಂತೋಷ, ಕುಸುಮ ಈರಿಯಂಥವರು ಅನುಭವಿಸುವ ಯಾತನೆ, ತಮ್ಮ ಮಿತಿಯಲ್ಲಿಯೇ ಗಾರಸಿದ್ಧಮಾವ, ಯಾಡ, ಅಮಾಸ ಮೊದಲಾದವರು ಪಡುವ ಶ್ರಮ, ಸಂದಿಗ್ಧತೆಯ ಸಂದರ್ಭಗಳು ಬಂದೊದಗಿದ್ದರೂ ತಮ್ಮ ಜೀವನದಲ್ಲಿ ಸುಖ ಸಂತೋಷಗಳಿಗೆ ಧಕ್ಕೆಯನ್ನುಂಟು ಮಾಡಿಕೊಳ್ಳಲಾರದ ಚೆನ್ನನ ಅಪ್ಪನಂಥವರ ಲವಲವಿಕೆಯ ಬದುಕು ಇತ್ಯಾದಿಗಳೆಲ್ಲ ಸಂವೇದನಾಶೀಲ ಚೌಕಟ್ಟಿನೊಳಗೇ ನಡೆಯುತ್ತವೆ. ಹೀಗಾಗಿ ಇಲ್ಲಿಯ ಬದುಕಿನಲ್ಲಿ ವೈವಿಧ್ಯತೆ ಇದೆ. ಇದಕ್ಕೆ ಪ್ರೇರಕವಾಗಿರುವ ಪರಿಸರದ ಸಾಂಸ್ಕøತಿಕ ವಿವರಗಳನ್ನು ಕೇವಲ ಚರ್ಚೆಗೆ, ಪರಿಶೀಲನೆಯ ಹಂತಕ್ಕೆ ಸೀಮಿತಗೊಳಿಸದೆ ಮೌಖಿಕ ಅಂಶಗಳನ್ನೆಲ್ಲಾ ಒಟ್ಟಾರೆಯಾಗಿ ಸಂಗ್ರಹಿಸಿ ಸುಂದರ ಕಥಾ ಚೌಕಟ್ಟಿನಲ್ಲಿ ಅಳವಡಿಸುವ ಕುಶಲಗಾರಿಕೆಯನ್ನು ಕಾದಂಬರಿಗಾರರು ಪ್ರದರ್ಶಿಸಿರುವುದು ಕಂಡುಬರುತ್ತದೆ. 

	60-70ರ ದಶಕದಲ್ಲಿನ ಲೋಹಿಯಾವಾದಿ ಸಮಾಜವಾದಿ ಪಕ್ಷ, ಸಮಾಜವಾದಿ ಯುವಜನಸಭಾದ ಚಟುವಟಿಕೆಗಳ ಪ್ರಭಾವಕ್ಕೆ ಒಳಗಾಗಿದ್ದ ಮಹಾದೇವ ಅವರ ವ್ಯಕ್ತಿತ್ವದ ಮೇಲೆ ಅನಂತಮೂರ್ತಿ, ಅಲನಹಳ್ಳಿಕೃಷ್ಣ ಮೊದಲಾದ ಲೇಖಕರ ಪ್ರಭಾವವೂ ಆಗಿತ್ತೆಂದು ಹೇಳಬಹುದು. ವಿದ್ಯಾರ್ಥಿ ದೆಸೆಯಲ್ಲಿಯೇ ನರ ಎಂಬ ಪ್ರತಿಭಟನಾ ಪತ್ರಿಕೆಯ ಸಂಪಾದಕಪ್ರಕಾಶಕರಾಗಿದ್ದ ಮಹಾದೇವ ಅವರು 1975ರಲ್ಲಿ ಜನಪ್ರಕಾಶ ನಾರಾಯಣರು ಮೈಸೂರಿಗೆ ಬಂದಿದ್ದಾಗ ಸಾರ್ವಜನಿಕ ಸಭೆಯೊಂದರ ಅಧ್ಯಕ್ಷತೆ ವಹಿಸಿ ಗೌರವಕ್ಕೆ ಪಾತ್ರರಾಗಿದ್ದರು. ಇವರು 1979ರಲ್ಲಿ ದಲಿತ ಬಂಡಾಯ ಸಾಹಿತ್ಯ ಚಳವಳಿಯ ನಿಕಟ ಸಂಬಂಧ ಹೊಂದಿದ್ದ ದಲಿತಸಂಘರ್ಷ ಸಮಿತಿಯ ಪ್ರಧಾನ ಸಂಘಟಕರಾಗಿಯೂ ಕಾರ್ಯನಿರ್ವಹಿಸಿದರು. 1989ರಲ್ಲಿ ಅಮೆರಿಕದ ಅಯೋವಾ ವಿಶ್ವವಿದ್ಯಾಲಯದಲ್ಲಿ ನಡೆದ ಇಂಟರ್ ನ್ಯಾಷನಲ್ ರೈಟಿಂಗ್ ಪ್ರೋಗ್ರಾಮ್‍ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದರು. ಇವರು ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಂದರ್ಶಕ ಪ್ರಾಧ್ಯಾಪಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

	ಮಹಾದೇವ ಅವರ ಕಥಾ ಸಾಹಿತ್ಯದಲ್ಲಿ ಗಮನ ಸೆಳೆದ ಒಡಲಾಳ, ಕುಸುಮಬಾಲೆ ಮತ್ತು ಅಮಾಸ ಇವೆಲ್ಲ ನಾಟಕಗಳಾಗಿ ರೂಪಾಂತರಗೊಂಡು ರಂಗಭೂಮಿಯಲ್ಲಿ ಯಶಸ್ವಿಯಾಗಿವೆ. 1984ರಲ್ಲಿ ಕಲ್ಕತ್ತೆಯ ಭಾರತೀಯ ಭಾಷಾಪರಿಷತ್ತು ಒಡಲಾಳಕ್ಕೆ ಪ್ರಶಸ್ತಿ ನೀಡಿ ಗೌರವಿಸಿದೆ. 1991ರಲ್ಲಿ ಕುಸುಮಬಾಲೆಗೆ ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು. 1995ರಲ್ಲಿ ಇವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ ಲಭಿಸಿವೆ. ಇವರ ಕೃತಿಗಳು ಇಂಗ್ಲಿಷ್ ಹಾಗೂ ಮತ್ತಿತರ ಭಾರತೀಯ ಭಾಷೆಗಳಿಗೆ ಅನುವಾದಗೊಂಡಿವೆ. ಯಾರ ಜಪ್ತಿಗೂ ಸಿಗದ ನವಿಲುಗಳು ಇವರ ಸಾಹಿತ್ಯ ಕುರಿತ ಚರ್ಚೆ ಹಾಗೂ ವಿಮರ್ಶೆಯ ವಿಶೇಷ ಬಗೆಯ ಕೃತಿಯಾಗಿದೆ.    										(ಜಿ.ಆರ್.ಟಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ